Mind Sharing?

ಕೌಟುಂಬಿಕ ದೌರ್ಜನ್ಯ ಮತ್ತು ಮಹಿಳೆಯ ರಕ್ಷಣೆ

ಕೌಟುಂಬಿಕ ದೌರ್ಜನ್ಯ ಎಂದರೆ ಕೇವಲ ದೈಹಿಕ ಕಿರುಕುಳ ಮಾತ್ರವಲ್ಲ ಅದು ಮಾನಸಿಕ ಹಿಂಸೆ, ಲೈಂಗಿಕ ದೌರ್ಜನ್ಯ, ಆರ್ಥಿಕ ದೌರ್ಜನ್ಯಗಳನ್ನು ಸಹ ಒಳಗೊಂಡಿದೆ. ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ ಪ್ರತಿ 4 ಮಹಿಳೆಯರಲ್ಲಿ ಒಬ್ಬ ಮಹಿಳೆ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ.
ಮಹಿಳೆಯ ಮೇಲೆ ದೈಹಿಕ, ಮಾತಿನ ಮೂಲಕ, ಭಾವನಾತ್ಮಕ, ಆರ್ಥಿಕ, ಧಾರ್ಮಿಕ, ಲೈಂಗಿಕ ವಾಗಿ ನಡೆಸುವ ಹಿಂಸೆಯನ್ನು ಕೌಟುಂಬಿಕ ದೌರ್ಜನ್ಯ ಎಂದು ಕರೆಯಲಾಗುತ್ತದೆ
ನವೆಂಬರ್ 25 ನೇ ತಾರೀಖನ್ನು ಅಂತರರಾಷ್ಟ್ರೀಯ ಕೌಟುಂಬಿಕ ದೌರ್ಜನ್ಯ ತಡೆ ದಿನವಾಗಿ ಆಚರಿಸಲಾಗುತ್ತದೆ

ದೈಹಿಕ ದೌರ್ಜನ್ಯ: ದೈಹಿಕ ದೌರ್ಜನ್ಯವು ಹೊಡೆಯುವುದು, ಕಚ್ಚುವುದು, ಕಪಾಳಮೋಕ್ಷ ಮಾಡುವುದು, ಕೂದಲನ್ನು ಎಳೆಯುವುದು, ದೇಹದ ಯಾವುದಾದರು ಅಂಗವನ್ನು ಸುಡುವುದು, ಕತ್ತರಿಸುವುದು ಇತ್ಯಾದಿಗಳನ್ನು ಒಳಗೊಂಡಿರುತ್ತದೆ (ಬಲಿಪಶುವಿನ ಮೇಲೆ ಉಂಟಾಗುವ ಯಾವುದೇ ರೀತಿಯ ಹಿಂಸಾತ್ಮಕ ನಡವಳಿಕೆ). ದೈಹಿಕ ಕಿರುಕುಳವು ಯಾರಿಗಾದರೂ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸುವುದು ಮತ್ತು ಮತ್ತೊಬ್ಬರಿಗೆ ಮಾದಕ ಪದಾರ್ಥ/ ಆಲ್ಕೊಹಾಲ್ ಬಳಕೆಯನ್ನು ಒತ್ತಾಯಿಸುವುದು ಸಹ ಒಳಗೊಂಡಿದೆ.

ಭಾವನಾತ್ಮಕ ದೌರ್ಜನ್ಯ:         ಭಾವನಾತ್ಮಕ ದೌರ್ಜನ್ಯವು ಬಲಿಪಶುವಿನ ಸ್ವ-ಮೌಲ್ಯ ಮತ್ತು/ಅಥವಾ ಸ್ವಾಭಿಮಾನಕ್ಕೆ ಧಕ್ಕೆ ಮಾಡುವುದನ್ನು ಒಳಗೊಂಡಿರುತ್ತದೆ. ಭಾವನಾತ್ಮಕ ನಿಂದನೆ, ಆಗಾಗ್ಗೆ ನಿರಂತರ ಟೀಕೆ, ಒಲ್ಲದ ಹೆಸರು ಕರೆಯುವುದು, ಬಲಿಪಶುವಿನ ಮಕ್ಕಳೊಂದಿಗಿನ ಅವಳ ಸಂಬಂಧವನ್ನು ಹಾಳುಗೆಡವುದು ಅಥವಾ ಬಲಿಪಶುವಿನ ಸಾಮರ್ಥ್ಯಗಳಲ್ಲಿ ಹಸ್ತಕ್ಷೇಪ ಮಾಡುವುದು.

ಲೈಂಗಿಕ ದೌರ್ಜನ್ಯ:       ದೌರ್ಜನ್ಯ ಮಾಡುವವನು ಬಲಿಪಶುವಿನ ಒಪ್ಪಿಗೆಯಿಲ್ಲದೆ ಲೈಂಗಿಕ ಸಂಪರ್ಕ ಅಥವಾ ಲೈಂಗಿಕ ನಡವಳಿಕೆಯನ್ನು ಹೊಂದಲು ಒತ್ತಾಯಿಸಿದಾಗ ಅಥವಾ ಬಲವಂತವಾಗಿ ಪ್ರಯತ್ನಿಸಿದಾಗ ಲೈಂಗಿಕ ಕಿರುಕುಳ ಸಂಭವಿಸುತ್ತದೆ. ಇದು ಹೆಚ್ಚಾಗಿ ವೈವಾಹಿಕ ಅತ್ಯಾಚಾರ, ಲೈಂಗಿಕ ದೇಹದ ಭಾಗಗಳ ಮೇಲೆ ಆಕ್ರಮಣ ಮಾಡುವುದು, ಲೈಂಗಿಕ ಹಿಂಸಾಚಾರದ ನಂತರ ನಡೆಯುವ ದೈಹಿಕ ಹಿಂಸೆ, ಬಲಿಪಶುವನ್ನು ಲೈಂಗಿಕವಾಗಿ ನಿಂದಿಸುವುದು ಅಥವಾ ಬಲಿಪಶುವಿನ ಇಷ್ಟಕ್ಕೆ ವಿರುದ್ಧವಾಗಿ ಲೈಂಗಿಕ ಹಾಸ್ಯಗಳನ್ನು ಹೇಳುವುದು ಮತ್ತು ಅಶ್ಲೀಲ ವಿಡಿಯೋಗಳನ್ನು ತೋರಿಸುವುದು.

ಆರ್ಥಿಕ ದೌರ್ಜನ್ಯ:     ದೌರ್ಜನ್ಯ ಮಾಡುವವರು ಬಲಿಪಶುವನ್ನು ಆರ್ಥಿಕವಾಗಿ ಅವಲಂಬಿಸುವಂತೆ ಮಾಡಲು ಪ್ರಯತ್ನಿಸಿದಾಗ ಅದು ಆರ್ಥಿಕ ದೌರ್ಜನ್ಯವೆಂದು ವ್ಯಾಖ್ಯಾನಿಸಲ್ಪಡುತ್ತದೆ. ಆರ್ಥಿಕ ದೌರ್ಜನ್ಯ ಮಾಡುವವರು ಬಲಿಪಶುವಿನ ಹಣಕಾಸಿನ ಸಂಪನ್ಮೂಲಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತಾರೆ, ಬಲಿಪಶುಗಳಿಗೆ ಹಣದ ಹರಿವನ್ನು ತಡೆಹಿಡಿಯುತ್ತಾರೆ ಅಥವಾ ಬಲಿಪಶು ಕೆಲಸಕ್ಕೆ ಹೋಗುವುದನ್ನು ನಿಷೇಧಿಸುತ್ತಾರೆ.

ಮಾನಸಿಕ ದೌರ್ಜನ್ಯ:         ಮಾನಸಿಕ ದೌರ್ಜನ್ಯ ಮಾಡುವವನು ತನ್ನ ಕೃತ್ಯಗಳಿಂದ ಬಲಿಪಶುವಿನಲ್ಲಿ ಭಯವನ್ನು ಉಂಟುಮಾಡುತ್ತಾನೆ. ಬಲಿಪಶುವಿಗೆ ಸಂಬಂಧವಿರುವ ಮಕ್ಕಳು, ಬಲಿಪಶುವಿನ ಕುಟುಂಬ, ಸ್ನೇಹಿತರು ಅಥವಾ ಸಾಕುಪ್ರಾಣಿಗಳನ್ನು ದೈಹಿಕವಾಗಿ ನೋಯಿಸುವ ಬೆದರಿಕೆ, ಆಕೆಯ ಆಸ್ತಿಯ ನಾಶ, ಸಾಕುಪ್ರಾಣಿಗಳಿಗೆ ಗಾಯ, ಆಕೆಯ ಪ್ರೀತಿಪಾತ್ರರಿಂದ ಪ್ರತ್ಯೇಕಿಸುವುದು ಮುಂತಾದವು.

ಹಿಂಬಾಲಿಸುವುದು(ಸ್ಟಾಕಿಂಗ್):         ಬಲಿಪಶುವನ್ನು ಹಿಂಬಾಲಿಸುವುದು, ಬೇಹುಗಾರಿಕೆ ಮಾಡುವುದು, ಕಳ್ಳತನದಲ್ಲಿ ನೋಡುವುದು, ಕಿರುಕುಳ ನೀಡುವುದು, ಬಲಿಪಶುವಿನ ಮನೆಯ ವ್ಯವಹಾರದಲ್ಲಿ ಅಥವಾ ಕೆಲಸದಲ್ಲಿ ಮೂಗು ತೂರಿಸುವುದು, ಉಡುಗೊರೆಗಳನ್ನು ಕಳುಹಿಸುವುದು, ಮಾಹಿತಿ ಸಂಗ್ರಹಿಸುವುದು, ಫೋನ್ ಕರೆ ಮಾಡುವುದು, ಲಿಖಿತ ಸಂದೇಶಗಳನ್ನು ಬಿಡುವುದು ಅಥವಾ ವ್ಯಕ್ತಿಯ ಮನೆ ಅಥವಾ ಕೆಲಸದ ಸ್ಥಳದಲ್ಲಿ ಕಾಣಿಸಿಕೊಳ್ಳುವುದು. ಈ ಕೃತ್ಯಗಳು ಪ್ರತ್ಯೇಕವಾಗಿ ಕಾನೂನುಬದ್ಧವಾಗಿವೆ, ಆದರೆ ಈ ಯಾವುದೇ ನಡವಳಿಕೆಗಳು ನಿರಂತರವಾಗಿ ಮಾಡಲ್ಪಟ್ಟರೆ ಅದು ಅಪರಾಧವಾಗುತ್ತವೆ.

ಸೈಬರ್‌ಸ್ಟಾಕಿಂಗ್:         ಸೈಬರ್ ಸ್ಟಾಕಿಂಗ್ ಎನ್ನುವುದು ಆನ್‌ಲೈನ್ ಕ್ರಿಯೆ. ಬಲಿಪಶುವಿನಲ್ಲಿ ಭಾವನಾತ್ಮಕ ಯಾತನೆ ಉಂಟುಮಾಡುವ ಪುನರಾವರ್ತಿತ ಇಮೇಲ್ ಅನ್ನು ಕಳುಹಿಸುವುದು ಹಾಗು ಆಕೆಯ ಸಾಮಾಜಿಕ ಜಾಲತಾಣಗಳನ್ನು ಹ್ಯಾಕ್ ಮಾಡಿ ಮಾನಸಿಕ ಕಿರಿಕಿರಿ ಉಂಟುಮಾಡುವುದು. ಬಲಿಪಶುವಿನ ಖಾಸಗಿ ಅಥವಾ ವೈಯ್ಯಕ್ತಿಕ ಫೋಟೋ/ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಹೆದರಿಸಿ ಮಾನಸಿಕ ಯಾತನೆ ಉಂಟುಮಾಡುವುದು.

2005 ರ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ

ಈ ಕಾಯ್ದೆಯ ಕಲಂ 3 ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಕಾನೂನಿನ ಮೂಲಕ ಪರಿಹಾರ ಒದಗಿಸುತ್ತದೆ
ಕಲಂ 2 (ಎ) ಭಾದಿತ ಮಹಿಳೆಯ ವಿವರಣೆ ನೀಡಿದೆ
ಭಾದಿತಮಹಿಳೆ ಎಂದರೆ ವಿವಾಹಿತ ಮಹಿಳೆ, ಅವಿವಾಹಿತ ಮಹಿಳೆ, ಮಗಳು, ಸೋದರಿಯನ್ನು ಒಳಗೊಳ್ಳುತ್ತದೆ

ಈ ಕಾಯ್ದೆಯು ಭಾದಿತ ಮಹಿಳೆಗೆ ಈ ಕೆಳಕಂಡಂತೆ ಪರಿಹಾರ ಒದಗಿಸುತದೆ

1) ಗಂಡನ ಮನೆಯಲ್ಲಿ ವಾಸಿಸುವ ಮತ್ತು ಆಕೆಯ ಮೇಲೆ ದೌರ್ಜನ್ಯ ನಡೆಸದಂತೆ ಎಚ್ಚರಿಕೆ ನೀಡುವುದು
2) ಗಂಡನ ಮನೆಯ ಒಂದು ಭಾಗವನ್ನು ಆಕೆಗೆ ನೀಡುವಂತೆ ಆದೇಶ ನೀಡುವುದು
3) ಆಕೆಯನ್ನು ಮನೆಯಿಂದ ಹೊರಹಾಕದಂತೆ ಮತ್ತು ಆಕೆ ಕೆಲಸ ಮಾಡುವ ಜಾಗದಲ್ಲಿ ತೊಂದರೆ ನೀಡದಂತೆ ಆದೇಶ ನೀಡುವುದು
4) ಜೀವನಾಂಶ ಮತ್ತು ದೌರ್ಜನ್ಯದಿಂದ ಅದ ನಷ್ಟ ಪರಿಹಾರ
5) ಮಾನಸಿಕ ಮತ್ತು ಭಾವನಾತ್ಮಕ ಒತ್ತಡಕ್ಕೆ ಪರಿಹಾರ

ಈ ಕಾನೂನಿನ ಅಡಿಯಲ್ಲಿ ರಕ್ಷಣೆ ಪಡೆಯುವ ವಿಧಾನ

1) ನಿಯುಕ್ತನಾದ ಸಂರಕ್ಷಣಾ ಅಧಿಕಾರಿಯ ಮೂಲಕ
2) ಉಚಿತ ಕಾನೂನು ಸೇವಾ ಪ್ರಾಧಿಕಾರದ ಮೂಲಕ
3) ಖಾಸಗಿ ವಕೀಲರ ಮೂಲಕ

ಈ ಕಾನೂನಿನ ಅಡಿಯಲ್ಲಿ ಕಾನೂನುಬಾಹಿರ ಕೃತ್ಯವೆಸಗಿದರೆ 1 ವರ್ಷದವರೆಗಿನ ಸೆರೆವಾಸ ಮತ್ತು 20,000 ರೂಪಾಯಿವರೆಗೂ ದಂಡ ವಿಧಿಸಬಹುದು

Mind Sharing?