ಲಿಂಗ ಸಮಾನತೆಯ ಬಗ್ಗೆ ಯಾವುದೇ ಹೆಣ್ಣು ಮಾತನಾಡಿದ ತಕ್ಷಣ ಈ ಪುರುಷಪ್ರಧಾನ ಸಮಾಜದಲ್ಲಿ ಆಕೆಯನ್ನು ತಪ್ಪಾಗಿ ಅರ್ಥೈಸುವುದೇ ಹೆಚ್ಚು. ಆಕೆಗೆ ಸಮಾನತೆ ಬೇಕಂತೆ ಹಾಗಾದರೆ ಗಂಡಸರ ತರ ಕ್ಲಿಷ್ಟಕರ ಕೆಲಸಗಳನ್ನು ಮಾಡಲಿ, ಗಂಡಸರ ಸಮಾನವಾಗಿ ಎಲ್ಲ ರೀತಿಯ ಚಟುವಟಿಕೆಗಳನ್ನು ನಿರ್ವಹಿಸಲಿ ಎಂದು ಮೂಗು ಮುರಿಯುವವರೇ ಹೆಚ್ಚು. ಹಾಗಾದರೆ ಲಿಂಗ ಸಮಾನತೆ ಎಂದರೆ ಏನು? ಮಹಿಳೆಯರು ಯಾವ ಲಿಂಗ ಸಮಾನತೆಗಾಗಿ ಹೋರಾಡುತ್ತಿದ್ದಾರೆ? ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. Gender equality ಮತ್ತು Sexual equality ಎಂಬ ವಿಷಯಗಳ ಬಗ್ಗೆ ಒಂದು ಸಣ್ಣ ಲೇಖನ
ಕನ್ನಡ ಭಾಷೆಯಲ್ಲಿ ಸಾಮಾನ್ಯವಾಗಿ Gender ಮತ್ತು Sex ಎಂಬ ಎರಡೂ ಪದಗಳನ್ನು ಪೂರಕ ಪದಗಳಂತೆ ಉಪಯೋಗಿಸುತ್ತಿದ್ದೇವೆ. ಕನ್ನಡದ ರೂಪಾಂತರವು ಸಹ ಈ ಎರಡೂ ಪದಗಳಿಗೆ ಲಿಂಗ ಎಂಬ ಅರ್ಥವನ್ನು ನೀಡುತ್ತದೆ. ಆದರೆ ಈ ಎರಡೂ ಪದಗಳಿಗೆ ಅಜಗಜಾಂತರ ವ್ಯತ್ಯಾಸವಿದ್ದು ಈ ಲೇಖನದಲ್ಲಿ ಓದುಗರಿಗೆ ಮನದಟ್ಟು ಮಾಡಿಕೊಡಲು ಪ್ರಯತ್ನಿಸುತಿದ್ದೇನೆ.
Sex ಎಂದರೆ ಜೈವಿಕವಾಗಿ ಗಂಡು ಮತ್ತು ಹೆಣ್ಣುಗಳ ನಡುವಿನ ವ್ಯತ್ಯಾಸ. ಅಂದರೆ ದೇಹ ರಚನೆ, ಜನನೇಂದ್ರಿಯ ಇತ್ಯಾದಿ ಜೈವಿಕವಾಗಿ ಗಂಡು ಮತ್ತು ಹೆಣ್ಣುಗಳ ನಡುವೆ ವ್ಯತ್ಯಾಸವಿರುತ್ತದೆ. ಇದು ಹುಟ್ಟಿನಿಂದಲೇ ನಿರ್ಧಾರವಾಗುತ್ತದೆ.
Gender ಎಂದರೆ ಸಾಮಾಜಿಕವಾಗಿ ಗಂಡು ಮತ್ತು ಹೆಣ್ಣುಗಳ ನಡುವೆ ವಿಧಿಸಿರುವ ವ್ಯತ್ಯಾಸ. ಅಂದರೆ ಸಮಾಜವು ಸೃಷ್ಟಿಸಿರುವ ವ್ಯತ್ಯಾಸ. ಹೆಣ್ಣು ಮನೆ ಕೆಲಸಕ್ಕೆ ಸೀಮಿತವಾಗಿರಬೇಕು, ಹೊರಗೆ ಕೆಲಸಕ್ಕೆ ಹೋಗಬಾರದು, ಆಕೆಯ ವೇಷಭೂಷಣಗಳ ಬಗ್ಗೆ ವಿಧಿಸಿರುವ ಕಟ್ಟುಪಾಡುಗಳು ಇತ್ಯಾದಿ. ಇದನ್ನು ವ್ಯತ್ಯಾಸ ಅನ್ನುವುದಕ್ಕಿಂತಲೂ ಆಚರಣೆ ಎಂದು ಕರೆಯುದು ಸೂಕ್ತ.
ಲಿಂಗ ಅಸಮಾನತೆಗಳು ಆಯಾ ಸಮಾಜದ ಸಂಸ್ಕೃತಿಯ ಒಂದು ಭಾಗವೆಂಬಂತೆ ಸಹಜವಾಗಿ ಬೆಳೆದಿದ್ದು ಪುರುಷ ಮತ್ತು ಸ್ತ್ರೀ ಇಬ್ಬರಿಂದಲೂ ಒಪ್ಪಲ್ಪಟ್ಟ ಸಾಮಾಜಿಕ ಕಟ್ಟುಪಾಡುಗಳಾಗಿವೆ. ಸ್ತ್ರೀ, ಸ್ತ್ರೀವಾದಿಗಳು ಮತ್ತು ಸಂಘ ಸಂಸ್ಥೆಗಳು ಗಂಡು ಹೆಣ್ಣುಗಳ ನಡುವೆ ಸಮಾಜವು ಸೃಷ್ಟಿಸಿರುವ Gender inequality ಅಸಮಾನತೆಯ ವಿರುದ್ಧ ಹೋರಾಟ ಮಾಡುತ್ತಿವೆಯೇ ಹೊರತು, ಪ್ರಕೃತಿದತ್ತವಾಗಿ ಬಂದಿರುವ Sexual inequality ಅಸಮಾನತೆಗಳನ್ನು ಹೋಗಲಾಡಿಸಲು ಅಲ್ಲ
ಲಿಂಗ ಸಮಾನತೆಯ ಪ್ರಾಮುಖ್ಯತೆ
೧) ಕೌಟುಂಬಿಕ ಸ್ವಾಸ್ಥ್ಯವನ್ನು ಹೆಚ್ಚಿಸಿ ಗಂಡು ಹೆಣ್ಣಿನ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸಲು
೨) ಮಹಿಳೆಯರು ಪುರುಷರಿಗಿಂತ ಕೀಳು, ಅಶಕ್ತರು ಎಂಬ ರೂಢಿಗತ ತಪ್ಪು ಕಲ್ಪನೆಗಳನ್ನು ತೊಡೆದುಹಾಕಿ ಸ್ತ್ರೀ ಪುರುಷರಿಬ್ಬರೂ ಸಮಾನ ಎಂಬ ಮನೋಭಾವ ಬೆಳೆಸಲು
೩) ಗಂಡು ಮಗುವೇ ಬೇಕೆಂದು ಹಪಹಪಿಸುವ ತಂದೆ ತಾಯಿಯರ ಮನಸ್ಥಿತಿಯನ್ನು ಬದಲಾಯಿಸಿ ಹೆಣ್ಣು ಮಗುವನ್ನು ಉತ್ತಮವಾಗಿ ಸಾಕಿ ಬೆಳೆಸುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಲು
೪) ಸ್ತ್ರೀ ಪುರುಷರಿಬ್ಬರನ್ನೂ ಕೌಟುಂಬಿಕ ಜವಾಬ್ದಾರಿಗಳಲ್ಲಿ ಸಮಾನ ಪಾಲುದಾರರನ್ನಾಗಿ ಮಾಡಲು
೫) ಮಹಿಳೆಯು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸಬಲೀಕರಣಗೊಳ್ಳಲು
೬) ಹೆಣ್ಣು ಮಕ್ಕಳ ವಿವಾಹದ ವಯಸ್ಸು, ಆರೋಗ್ಯ ಮತ್ತು ಸಂತಾನೋತ್ಪತ್ತಿ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು
೭) ಹೆಣ್ಣು ಭ್ರೂಣ ಹತ್ಯೆಯನ್ನು ತಡೆದು ಲಿಂಗಾನುಪಾತವನ್ನು ಸರಿದೂಗಿಸಲು