ಜನರ ಹಕ್ಕುಗಳನ್ನು ನಿರಾಕರಿಸಿದರೆ ಅದು ಅವರ ಮನುಷ್ಯತ್ವವನ್ನೇ ತಿರಸ್ಕರಿಸಿದಂತೆ- ನೆಲ್ಸನ್ ಮಂಡೇಲ
“ಮಾನವ ಹಕ್ಕುಗಳು” ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಗೂ ಹುಟ್ಟಿನಿಂದ ಸಾವಿನವರೆಗೆ ಇರುವ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳು. ಮಾನವ ಹಕ್ಕುಗಳು ಎಂಬ ಪದವು ಅವುಗಳ ಸ್ವಭಾವದಲ್ಲಿ ಅಂತರ್ಗತವಾಗಿರುವ ಎಲ್ಲ ಹಕ್ಕುಗಳನ್ನು ಸೂಚಿಸುತ್ತದೆ ಮತ್ತು ಅವುಗಳು ಇಲ್ಲದೆ ನಾವು ಮಾನವರಾಗಿ ಬದುಕಲು ಸಾಧ್ಯವಿಲ್ಲ. ನೀವು ಪ್ರಪಂಚದ ಯಾವ ಭಾಗದಿಂದ ಬಂದಿದ್ದೀರಿ, ನೀವು ಯಾವ ಭಾಷೆ ಆಡುತ್ತೀರಿ, ಯಾವ ಧರ್ಮವನ್ನು ನಂಬುತ್ತೀರಿ ಅಥವಾ ನಿಮ್ಮ ಜೀವನವನ್ನು ಹೇಗೆ ನಡೆಸುತ್ತೀರಿ ಎಂಬುದರ ಹೊರತಾಗಿಯೂ ಹಕ್ಕುಗಳು ಎಲ್ಲ ಮಾನವರಿಗೂ ಸಮಾನವಾಗಿ ಅನ್ವಯಿಸುತ್ತವೆ. ಅವುಗಳನ್ನು ಎಂದಿಗೂ ನಿಮ್ಮಿಂದ ಕಸಿಯಲು ಸಾಧ್ಯವಿಲ್ಲ. ಆದರೂ ಅವುಗಳನ್ನು ಕೆಲವೊಮ್ಮೆ ನಿರ್ಬಂಧಿಸಬಹುದು – ಉದಾಹರಣೆಗೆ ಒಬ್ಬ ವ್ಯಕ್ತಿಯು ಕಾನೂನನ್ನು ಉಲ್ಲಂಘಿಸಿದರೆ ಅಥವಾ ಆತನು ರಾಷ್ಟ್ರೀಯ ಭದ್ರತೆಗೆ ಮಾರಕವಾಗಿದ್ದಾನೆ ಎಂದು ನಂಬಲು ಕಾರಣಗಳು ಇದ್ದಾರೆ ಆತನನ್ನು ಬಂಧಿಸಬಹುದು ಮತ್ತು ಆತನ ಸ್ವಾತಂತ್ರ್ಯವನ್ನು ಮೊಟಕುಗೊಳಿಸಬಹುದು.
ಈ ಮಾನವ ಹಕ್ಕುಗಳು ಘನತೆ, ನ್ಯಾಯಸಮ್ಮತತೆ, ಸಮಾನತೆ, ಗೌರವ ಮತ್ತು ಸ್ವಾತಂತ್ರ್ಯದಂತಹ ಅತ್ಯುನ್ನತ ಮೌಲ್ಯಗಳನ್ನು ಆಧರಿಸಿವೆ. ಈ ಮೌಲ್ಯಗಳನ್ನು ಆಯಾಯ ದೇಶಗಳ ಕಾನೂನಿನಿಂದ ವ್ಯಾಖ್ಯಾನಿಸಲಾಗಿದೆ ಮತ್ತು ಪ್ರತಿಯೊಬ್ಬ ಮಾನವನಿಗೂ ಆ ಕಾನೂನುಗಳ ಮೂಲಕ ರಕ್ಷಣೆಯನ್ನು ಒದಗಿಸಲಾಗಿದೆ.
ಮಾನವ ಹಕ್ಕುಗಳ ಪರಿಕಲ್ಪನೆಯ ಉದಯ:
ನಾಗರಿಕತೆ ಉದಯವಾಗುವ ಮುಂಚೆ ಬಲಶಾಲಿಯಾಗಿದ್ದವನು ಮಾತ್ರ ಬದುಕುತ್ತಾನೆ (Survival of the fittest) ಎಂಬುದೇ ಮಾನವನ ಜೀವನ ಕ್ರಮವಾಗಿತ್ತು. ನಾಗರಿಕತೆಯ ಬೆಳವಣಿಗೆಗಳ ಜೊತೆಜೊತೆಗೆ ಮನುಷ್ಯನು ತನ್ನ ಜೀವಿಸುವ ಹಕ್ಕನ್ನು ಪ್ರತಿಪಾದಿಸುವ ಪ್ರಯತ್ನವನ್ನು ಶುರುಮಾಡಿದನು. ಆಗಿನಿಂದಲೇ ಮಾನವ ಹಕ್ಕುಗಳ ಪರಿಕಲ್ಪನೆಯು ಮೊಳಕೆಯೊಡೆಯಲು ಪ್ರಾರಂಭವಾಯಿತು.
ಮಾನವ ಹಕ್ಕುಗಳ ಬಗ್ಗೆ ತಿಳುವಳಿಕೆಯ ಮೂಲ ಮತ್ತು ಬೆಳವಣಿಗೆಯನ್ನು 3 ಹಂತಗಳಲ್ಲಿ ವಿಭಜಿಸಬಹುದು.
1) ಮಾನವ ಹಕ್ಕುಗಳ ಪರಿಕಲ್ಪನೆಯು ತನ್ನ ಬೇರನ್ನು ವಿವಿಧ ದೇಶಗಳಲ್ಲಿ ಮತ್ತು ವಿಭಿನ್ನ ಕಾಲದಲ್ಲಿ ಧರ್ಮದ ರೂಪದಲ್ಲಿ ಹುಟ್ಟುವ ಮತ್ತು ಅಭಿವೃದ್ಧಿ ಹೊಂದುವ ಮೂಲಕ ಪಡೆದುಕೊಂಡಿದೆ. ಈ ಪರಿಕಲ್ಪನೆಯು ವಿವಿಧ ಧರ್ಮಗ್ರಂಥಗಳಲ್ಲಿ ವ್ಯಾಖ್ಯಾನಿಸಿರುವ ಮಾನವರ ಮೇಲೆ ಕರುಣೆ, ದಯೆ ಮುಂತಾದ ಪದಗಳಿಂದ ಹುಟ್ಟಿಕೊಂಡಿದೆ ಎಂದು ಭಾವಿಸಬಹುದು. ಕೆಲವು ವಿದ್ವಾಂಸರು ಮಾನವ ಹಕ್ಕುಗಳ ಪರಿಕಲ್ಪನೆಯ ಮೂಲವನ್ನು ಪ್ರಾಚೀನ ಗ್ರೀಸ್‌ನ ಕಾಲಕ್ಕೆ ಕೊಂಡೊಯ್ಯುತ್ತಾರೆ. ಅವರ ಪ್ರಕಾರ ಮಾನವ ಹಕ್ಕುಗಳ ಪರಿಕಲ್ಪನೆಯು ಕಾಲಾನುಕ್ರಮದಲ್ಲಿ ಮಾನವನ ಸಾಮಾಜಿಕ ನಡವಳಿಕೆಯಿಂದ ಜನಜನಿತವಾಗಿ ಬಂದಿರುವ ನೈಸರ್ಗಿಕ ಕಾನೂನಿನ ವಿಚಾರಧಾರೆಗಳಲ್ಲಿ ಅಡಗಿದೆ.
ಗ್ರೀಸ್ ದೇಶದಲ್ಲಿ ಸ್ಟೋಯಿಕ್ ಫಿಲಾಸಫಿಯು “ನ್ಯಾಚುರಲ್ ಲಾ ಥಿಯರಿ” ಯನ್ನು ಅಭಿವೃದ್ಧಿಪಡಿಸಿತು ಮತ್ತು ಮೊದಲು ಮಾನವ ಹಕ್ಕುಗಳ ಸ್ವರೂಪವನ್ನು ವಿವರಿಸಿತು. ಭಾರತ ದೇಶದಲ್ಲಿ ರಚಿಸಲ್ಪಟ್ಟಿರುವ ಋಗ್ವೇದದಲ್ಲಿ ತಾನ(ದೇಹ), ಸ್ಕೃಥಿ(ವಾಸಸ್ಥಾನ) ಮತ್ತು ಜುಭಾಸಿ(ಜೀವ) ಎಂಬ ಶಬ್ದಗಳನ್ನು ಬಳಸಿದ್ದು ಅವುಗಳು ಮಾನವ ಹಕ್ಕುಗಳನ್ನು ಪ್ರತಿಪಾದಿಸುತ್ತದೆ ಎಂದು ನಂಬಲಾಗಿದೆ.
2) ನವೋದಯದ ಸಮಯದಲ್ಲಿ ಊಳಿಗಮಾನ ಪದ್ಧತಿಯ ಕುಸಿತ ಪ್ರಾರಂಭವಾಯಿತು. ಹೊಸ ನಂಬಿಕೆಗಳು ಹಳೆಯ ನಂಬಿಕೆಗಳನ್ನು ಬದಲಾಯಿಸಿದವು. ನವೋದಯ ಚಳವಳಿಯ ಕಾರಣದಿಂದಾಗಿ ನೈಸರ್ಗಿಕ ಕಾನೂನು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಪರಿಕಲ್ಪನೆ ಹುಟ್ಟಿಕೊಂಡಿತು.
ಎ) ಬ್ರಿಟನ್ನಿನಲ್ಲಿ 1215 ರಲ್ಲಿ ಕಿಂಗ್ ಜಾನ್ ರವರು ಹೊರಡಿಸಿದ ಮ್ಯಾಗ್ನಕಾರ್ಟ
ಬಿ) 1689 ರ ಬಿಲ್ ಆಫ್ ರೈಟ್ಸ್
ಸಿ) ಅಮೆರಿಕದ ಸ್ವಾತಂತ್ರ್ಯ ಘೋಷಣೆ, 1776
ಈ ಮೇಲ್ಕಂಡ ವುಗಳನ್ನು ಮಾನವನ ಹಕ್ಕುಗಳ ಪರಿಕಲ್ಪನೆಯಲ್ಲಿ ಬಹುಮುಖ್ಯವಾದ ಹಂತಗಳೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ಕಾನೂನುಗಳಲ್ಲಿ ಹಂತಹಂತವಾಗಿ ಮಾನವ ಹಕ್ಕುಗಳನ್ನು ಉಲ್ಲೇಖಿಸಿ ಅವುಗಳ ರಕ್ಷಣೆಗಾಗಿ ಕಾನೂನು ಮಾನ್ಯತೆಯನ್ನು ನೀಡಲಾಯಿತು.
3) ಮೊದಲನೆಯ ಮಹಾಯುದ್ಧ ಮುಗಿದ ನಂತರ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮತ್ತು ಅವುಗಳ ರಕ್ಷಣೆಯ ಸಂಬಂಧ ಎಲ್ಲ ದೇಶಗಳು ಕಾನೂನುಗಳನ್ನು ರೂಪಿಸುವಂತೆ ಉತ್ತೇಜಿಸಲು ಮತ್ತು ಸಾರ್ವತ್ರಿಕಗೊಳಿಸಲು ಕೆಲವು ಪ್ರಯತ್ನಗಳನ್ನು ಮಾಡಲಾಯಿತು. ವರ್ಸೈಲ್ಸ್ ಒಪ್ಪಂದವನ್ನು ಮಾಡಿಕೊಳ್ಳಲಾಯಿತು, ಆದರೆ ಅದು ಯಾವುದೇ ಪರಿಣಾಮ ಬೀರಲಿಲ್ಲ. 1945 ರ ಜೂನ್ 25 ರಂದು ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ, ವಿಶ್ವಸಂಸ್ಥೆಯ ಚಾರ್ಟರ್ ಅನ್ನು ಅಂತಿಮಗೊಳಿಸಲಾಯಿತು. ಈ ಚಾರ್ಟರ್ ನಲ್ಲಿ ಮಾನವ ಹಕ್ಕುಗಳ ರಕ್ಷಣೆ ಮತ್ತು ಉತ್ತೇಜನಕ್ಕೆ ಸಂಬಂಧಿಸಿದ ಹಲವಾರು ನಿಬಂಧನೆಗಳನ್ನು ರೂಪಿಸಲಾಗಿದೆ. 1948 ರ ಡಿಸೆಂಬರ್ 10 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು(Universal Declaration of Human Rights) ಅಂಗೀಕರಿಸಿತು. ಆದ್ದರಿಂದ ಪ್ರತಿವರ್ಷ ಡಿಸೆಂಬರ್ 10 ನೇ ತಾರೀಖನ್ನು ವಿಶ್ವ ಮಾನವ ಹಕ್ಕುಗಳ ದಿನವೆಂದು ಆಚರಿಸಲಾಗುತ್ತಿದೆ.
ಮಾನವ ಹಕ್ಕುಗಳು ಯಾವುವು?
ಜೀವಿಸುವ ಹಕ್ಕು, ವಾಕ್ ಸ್ವಾತಂತ್ರ, ಆಹಾರದ ಹಕ್ಕು, ಶಿಕ್ಷಣದ ಹಕ್ಕು, ಸಾಮಾಜಿಕ ಭದ್ರತೆ, ದೌರ್ಜ್ಯನ ವಿರುದ್ಧ ಹಕ್ಕು, ಸಂಘಟನೆಯ ಹಕ್ಕು, ರಾಷ್ಟ್ರೀಯತೆ ಹಕ್ಕು, ರಕ್ಷಣೆಯ ಹಕ್ಕು, ಆರೋಗ್ಯದ ಹಕ್ಕು, ಧಾರ್ಮಿಕ ಹಕ್ಕು ಹೀಗೆ ಹಲವಾರು ಹಕ್ಕುಗಳನ್ನು ವಿಶ್ವಸಂಸ್ಥೆಯು ತನ್ನ ಚಾರ್ಟರ್ ನಲ್ಲಿ ಅಳವಡಿಸಿದೆ.
ಮಾನವ ಹಕ್ಕುಗಳು ಮತ್ತು ಭಾರತ:
ಈ ಮೇಲೆ ತಿಳಿಸಿದಂತೆ ಭಾರತದ ಋಗ್ವೇದದಲ್ಲಿ ತಾನ(ದೇಹ), ಸ್ಕೃಥಿ(ವಾಸಸ್ಥಾನ) ಮತ್ತು ಜುಭಾಸಿ(ಜೀವ) ಎಂಬ ಶಬ್ದಗಳನ್ನು ಬಳಸಿರುವುದು ವೇದಗಳ ಕಾಲದಲ್ಲೇ ಮಾನವನಿಗೆ ತನ್ನ ಹುಟ್ಟಿನಿಂದಲೇ ಸಿಗಬೇಕಾದ ಹಕ್ಕುಗಳ ಬಗ್ಗೆ ಅರಿವು ಇತ್ತು ಎಂದು ನಂಬಲಾಗಿರುವುದರಿಂದ ಮಾನವ ಹಕ್ಕು ಎಂಬ ಪದವು ಭಾರತ ದೇಶಕ್ಕೆ ಹೊಸದು ಅಥವಾ ಪಾಶ್ಚಿಮಾತ್ಯರ ಕೊಡುವೆ ಎನ್ನುವುದು ತಪ್ಪು ಕಲ್ಪನೆ ಎಂದು ವಾದಿಸಲಾಗಿದೆ.
1948 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿದ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ(UDHR), ಸಾರ್ವತ್ರಿಕವಾಗಿ ರಕ್ಷಿಸಬೇಕಾದ ಮೂಲಭೂತ ಮಾನವ ಹಕ್ಕುಗಳನ್ನು ರೂಪಿಸಿದ ಮೊದಲ ಕಾನೂನು ದಾಖಲೆಯಾಗಿದೆ ಹಾಗು ಎಲ್ಲಾ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ಅಡಿಪಾಯವಾಗಿ ಮುಂದುವರೆದಿದೆ. ಭಾರತ ದೇಶವು ಈ ಸಮಯದಲ್ಲಿ ತನ್ನ ನೆಲದ ಸಂವಿಧಾನವನ್ನು ರಚಿಸುತ್ತಿದ್ದರಿಂದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿದ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ತನ್ನ ಸಂವಿಧಾನದಲ್ಲಿ ಯಥಾವತ್ತಾಗಿ ಅಳವಡಿಸಿಕೊಂಡಿತು.
ಸಂವಿಧಾನದ ಪರಿಚ್ಛೇದ 3 ರಲ್ಲಿ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ಕಡ್ಡಾಯವಾಗಿ ನೀಡಲೇಬೇಕಾದ ಹಕ್ಕುಗಳನ್ನು ವಿವರಿಸಲಾಗಿದೆ. ಯಾವುದೇ ಪ್ರಜೆಯ ಮೂಲಭೂತ ಹಕ್ಕುಗಳಿಗೆ ಧಕ್ಕೆಯುಂಟಾದಾಗ, ಆತನ ಹಕ್ಕುಗಳನ್ನು ಮರುಸ್ಥಾಪಿಸುವ ಹೊಣೆಯನ್ನು ಎಲ್ಲ ರಾಜ್ಯಗಳ ಹೈಕೋರ್ಟ್ ಮತ್ತು ಭಾರತದ ಸುಪ್ರೀಂ ಕೋರ್ಟ್ ಗೆ ನೀಡಲಾಗಿದೆ. ಸಂವಿಧಾನದ ಆರ್ಟಿಕಲ್ 32 ಮತ್ತು 226 ರಲ್ಲಿ ನ್ಯಾಯಾಲಯಗಳಿಗೆ ನೀಡಿರುವ ರಿಟ್ ಅಧಿಕಾರಗಳ ಮೂಲಕ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಗಳು ಪ್ರಜೆಗಳ ಹಕ್ಕುಗಳನ್ನು ಮರುಸ್ಥಾಪಿಸುತ್ತವೆ. ಇವುಗಳಲ್ಲದೆ ರಾಷ್ಟೀಯ ಮಾನವ ಹಕ್ಕುಗಳ ಆಯೋಗಯು ರಾಷ್ಟೀಯ ಮಟ್ಟದಲ್ಲಿ ಮತ್ತು ವಿವಿಧ ರಾಜ್ಯಗಳ ರಾಜ್ಯ ಮಾನವ ಹಕ್ಕುಗಳ ಆಯೋಗಗಳು ಪ್ರಾದೇಶಿಕ ಮಟ್ಟದಲ್ಲಿ ತಮ್ಮದೇ ವ್ಯಾಪ್ತಿಯಲ್ಲಿ ಯಾವುದೇ ಪ್ರಜೆಯ ಮಾನವ ಹಕ್ಕಿಗೆ ಉಂಟಾದ ಧಕ್ಕೆಯನ್ನು ಸರಿಪಡಿಸಲು ಪ್ರಯತ್ನ ಮಾಡುತ್ತಿವೆ.
ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯಲ್ಲಿ(UDHR) ನೀಡಲಾಗಿರುವ ಮಾನವಹಕ್ಕುಗಳು ಭಾರತ ದೇಶದ ಸಂವಿಧಾನದ 3 ನೇ ಪರಿಚ್ಛೇದದಲ್ಲಿ ಅಡಕವಾಗಿದ್ದು ಅವುಗಳು ಈ ಕೆಳಕಂಡಂತೆ ಇರುತ್ತವೆ
1) ಕಾನೂನಿನ ಮುಂದೆ ಎಲ್ಲರು ಸಮಾನರು: UDHR ಆರ್ಟಿಕಲ್ 7. ಭಾರತದ ಸಂವಿಧಾನ ಆರ್ಟಿಕಲ್ 14 (ಕಾನೂನಿನ ಮುಂದೆ ಯಾವುದೇ ವ್ಯಕ್ತಿಗೆ ಸಮಾನತೆ ಅಥವಾ ಭಾರತದ ಭೂಪ್ರದೇಶದೊಳಗಿನ ಕಾನೂನುಗಳ ಸಮಾನ ರಕ್ಷಣೆಯನ್ನು ರಾಜ್ಯವು ನಿರಾಕರಿಸುವಂತಿಲ್ಲ)
2) ಯಾವುದೇ ತಾರತಮ್ಯವಿಲ್ಲದೆ ಕಾನೂನಿನ ಸಮಾನ ರಕ್ಷಣೆ: UDHR ಆರ್ಟಿಕಲ್ 7(2). ಭಾರತದ ಸಂವಿಧಾನ ಆರ್ಟಿಕಲ್ 15 (ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಹುಟ್ಟಿದ ಸ್ಥಳದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುವುದು)
3) ತನ್ನ ದೇಶದ ಸರ್ಕಾರದಲ್ಲಿ ಭಾಗವಹಿಸುವ ಹಕ್ಕು: UDHR ಆರ್ಟಿಕಲ್ 21. ಭಾರತದ ಸಂವಿಧಾನ ಆರ್ಟಿಕಲ್ 16 (ರಾಜ್ಯದ ಅಡಿಯಲ್ಲಿರುವ ಯಾವುದೇ ಕಚೇರಿಗೆ ಉದ್ಯೋಗ ಅಥವಾ ನೇಮಕಾತಿಗೆ ಸಂಬಂಧಿಸಿದ ವಿಷಯಗಳಲ್ಲಿ ಎಲ್ಲಾ ನಾಗರಿಕರಿಗೆ ಸಮಾನ ಅವಕಾಶ)
4) ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು: UDHR ಆರ್ಟಿಕಲ್ 19. ಭಾರತದ ಸಂವಿಧಾನ ಆರ್ಟಿಕಲ್ 19(1) (ಎಲ್ಲಾ ನಾಗರಿಕರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ)
5) ಶಾಂತಿಯುತ ಸಭೆ ಮತ್ತು ಸಂಘದ ಸ್ವಾತಂತ್ರ್ಯದ ಹಕ್ಕು: UDHR ಆರ್ಟಿಕಲ್ 20(1). ಭಾರತದ ಸಂವಿಧಾನ ಆರ್ಟಿಕಲ್ 19(1)(B) (ಎಲ್ಲಾ ನಾಗರಿಕರು ಶಾಂತಿಯುತವಾಗಿ ಮತ್ತು ಶಸ್ತ್ರಾಸ್ತ್ರಗಳಿಲ್ಲದೆ ಒಂದು ಸ್ಥಳದಲ್ಲಿ ಸೇರುವ ಮತ್ತು ಸಭೆ ಸಮಾರಂಭವನ್ನು ನಡೆಸುವ ಹಕ್ಕನ್ನು ಹೊಂದಿರುತ್ತಾರೆ.)
6) ಕೆಲಸದ ಹಕ್ಕು ಮತ್ತು ತನ್ನಿಷ್ಟದ ಉದ್ಯೋಗದ ಆಯ್ಕೆ: UDHR ಆರ್ಟಿಕಲ್ 23. ಭಾರತದ ಸಂವಿಧಾನ ಆರ್ಟಿಕಲ್ 19(1)(C) (ಎಲ್ಲಾ ನಾಗರಿಕರಿಗೆ ಸಂಘಗಳು ಅಥವಾ ಸಂಘಟನೆಗಳು ಅಥವಾ ಸಹಕಾರಿ ಸಂಘಗಳನ್ನು ರಚಿಸಿಕೊಳ್ಳುವ ಹಕ್ಕಿದೆ)
7) ದೇಶದಾದ್ಯಂತ ಚಲನೆಯ ಸ್ವಾತಂತ್ರ್ಯ ಮತ್ತು ವಾಸಿಸುವ ಹಕ್ಕು: UDHR ಆರ್ಟಿಕಲ್ 13(1). ಭಾರತದ ಸಂವಿಧಾನ ಆರ್ಟಿಕಲ್ 19(1)(D) ( ನಾಗರಿಕರಿಗೆ ಭಾರತದ ಭೂಪ್ರದೇಶದಾದ್ಯಂತ ಮುಕ್ತವಾಗಿ ಚಲಿಸುವ ಮತ್ತು ಯಾವುದೇ ಪ್ರದೇಶದಲ್ಲಿ ವಾಸಿಸುವ ಹಕ್ಕಿದೆ)
8) ಆಸ್ತಿ ಹೊಂದುವ ಹಕ್ಕು: UDHR ಆರ್ಟಿಕಲ್ 17. ಭಾರತದ ಸಂವಿಧಾನ ಆರ್ಟಿಕಲ್ 31
9) ಚಾಲ್ತಿಯಲ್ಲಿ ಇರದೇ ಇರುವ ಕಾನೂನು ಅಭಿಯೋಜನೆಗಳಿಂದ ಸ್ವಾತಂತ್ರ್ಯ: UDHR ಆರ್ಟಿಕಲ್ 11. ಭಾರತದ ಸಂವಿಧಾನ ಆರ್ಟಿಕಲ್ 20(1) (ಅಪರಾಧವೆಂದು ಆರೋಪಿಸಲ್ಪಟ್ಟ ಕೃತ್ಯವು ಆ ಸಮಯದಲ್ಲಿ ಹಾಗು ಆ ಪ್ರದೇಶದಲ್ಲಿ ಜಾರಿಯಲ್ಲಿರುವ ಕಾನೂನನ್ನು ಉಲ್ಲಂಘಿಸುವುದನ್ನು ಹೊರತುಪಡಿಸಿ ಯಾವುದೇ ವ್ಯಕ್ತಿಗೆ ಯಾವುದೇ ಅಪರಾಧಕ್ಕೆ ಶಿಕ್ಷೆಯಾಗಬಾರದು ಅಥವಾ ಜಾರಿಯಲ್ಲಿರುವ ಕಾನೂನಿನಡಿಯಲ್ಲಿ ವಿಧಿಸಲಾಗಿದ್ದಕ್ಕಿಂತ ಹೆಚ್ಚಿನ ದಂಡನೆಗೆ ಒಳಪಡಿಸಬಾರದು (2) ಒಂದೇ ಅಪರಾಧಕ್ಕೆ ಯಾವುದೇ ವ್ಯಕ್ತಿಯನ್ನು ಒಂದಕ್ಕಿಂತ ಹೆಚ್ಚು ಬಾರಿ ವಿಚಾರಣೆಗೆ ಒಳಪಡಿಸಬಾರದು ಮತ್ತು ಶಿಕ್ಷಿಸಬಾರದು (3) ಯಾವುದೇ ಅಪರಾಧದ ಆರೋಪ ಹೊತ್ತಿರುವ ಯಾವುದೇ ವ್ಯಕ್ತಿಯು ತನ್ನ ವಿರುದ್ಧವೇ ಸಾಕ್ಷಿಯಾಗಲು ಒತ್ತಾಯಿಸಬಾರದು)
10) ಅಕ್ರಮ ಬಂಧನ ಅಥವಾ ಅಕ್ರಮ ಗಡಿಪಾರುಗಳಿಂದ ಸ್ವಾತಂತ್ರ್ಯ: UDHR ಆರ್ಟಿಕಲ್ 9. ಭಾರತದ ಸಂವಿಧಾನ ಆರ್ಟಿಕಲ್ 21 (ಕಾನೂನಿನಿಂದ ಸ್ಥಾಪಿಸಲ್ಪಟ್ಟ ಕಾರ್ಯವಿಧಾನದ ಪ್ರಕಾರ ಹೊರತುಪಡಿಸಿ ಯಾವುದೇ ವ್ಯಕ್ತಿಯು ತನ್ನ ಜೀವನ ಅಥವಾ ವೈಯಕ್ತಿಕ ಸ್ವಾತಂತ್ರ್ಯದಿಂದ ವಂಚಿತನಾಗುವುದಿಲ್ಲ)
11) ಗುಲಾಮಗಿರಿ ಅಥವಾ ದಾಸ್ಯದಿಂದ ಸ್ವಾತಂತ್ರ್ಯ: UDHR ಆರ್ಟಿಕಲ್ 4. ಭಾರತದ ಸಂವಿಧಾನ ಆರ್ಟಿಕಲ್ 23 (ಮಾನವ ಕಳ್ಳಸಾಗಾಣಿಕೆ ಮತ್ತು ಬಲವಂತದ ಭಿಕ್ಷಾಟನೆ ಹಾಗು ಇತರ ರೀತಿಯ ಬಲವಂತದ ಗುಲಾಮಗಿರಿಯನ್ನು ನಿಷೇಧಿಸಲಾಗಿದೆ ಮತ್ತು ಈ ನಿಬಂಧನೆಯ ಯಾವುದೇ ಉಲ್ಲಂಘನೆಯು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ)
12) ಯಾವುದೇ ಧರ್ಮವನ್ನು ಸ್ವೀಕರಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕು: UDHR ಆರ್ಟಿಕಲ್ 18. ಭಾರತದ ಸಂವಿಧಾನ ಆರ್ಟಿಕಲ್ 25 (ಎಲ್ಲಾ ವ್ಯಕ್ತಿಗಳು ಸಮಾನವಾಗಿ ತಮ್ಮ ಆಯ್ಕೆಯ ಧರ್ಮವನ್ನು ಪಾಲನೆ ಮಾಡುವ ಸ್ವಾತಂತ್ರ್ಯಕ್ಕೆ ಅರ್ಹರಾಗಿದ್ದಾರೆ ಮತ್ತು ಧರ್ಮವನ್ನು ಘೋಷಿಸಲು, ಅಭ್ಯಾಸ ಮಾಡಲು ಮತ್ತು ಪ್ರಚಾರ ಮಾಡಲು ಮುಕ್ತವಾಗಿ ಹಕ್ಕು ಹೊಂದಿದ್ದಾರೆ)
13) ಸಾಮಾಜಿಕ ಭದ್ರತೆಯ ಹಕ್ಕು: UDHR ಆರ್ಟಿಕಲ್ 22. ಭಾರತದ ಸಂವಿಧಾನ ಆರ್ಟಿಕಲ್ 29(1) (ಅಲ್ಪಸಂಖ್ಯಾತರ ಹಿತಾಸಕ್ತಿಗಳ ರಕ್ಷಣೆ, ಭಾರತದ ಭೂಪ್ರದೇಶದಲ್ಲಿ ವಾಸಿಸುವ ಯಾವುದೇ ವರ್ಗದ ನಾಗರಿಕರು ತನ್ನದೇ ಆದ ಒಂದು ವಿಶಿಷ್ಟ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಹೊಂದಬಹುದು ಮತ್ತು ಆದನ್ನು ಸಂರಕ್ಷಿಸುವ ಹಕ್ಕನ್ನು ಹೊಂದಿರುತ್ತಾರೆ)
14) ಶಿಕ್ಷಣದ ಹಕ್ಕು: UDHR ಆರ್ಟಿಕಲ್ 26(3). ಭಾರತದ ಸಂವಿಧಾನ ಆರ್ಟಿಕಲ್ 30(1) ( ಎಲ್ಲಾ ಅಲ್ಪಸಂಖ್ಯಾತರು, ಧರ್ಮ ಅಥವಾ ಭಾಷೆಯ ಆಧಾರದ ಮೇಲೆ ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ಹೊಂದಿರುತ್ತಾರೆ)