Mind Sharing?

ಸ್ನೇಹಿತರೆ
ಇಂದು ಇಡೀ ವಿಶ್ವವೇ ಡಿಜಿಟಲ್ ಲೋಕದಲ್ಲಿ ಮುಳುಗಿದ್ದು, ಎಲ್ಲರ ಕೈಯಲ್ಲೂ ಮೊಬೈಲ್ ಫೋನುಗಳು, ಮನೆಗಳಲ್ಲಿ ಡೆಸ್ಕ್ ಟಾಪ್ಗಳು  ತುಂಬಿಹೋಗಿವೆ. ಪುಸ್ತಕಗಳನ್ನು ಓದುವವರ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗಿದೆ. ಇ-ಪತ್ರಿಕೆಗಳನ್ನು ಓದುವ ಹವ್ಯಾಸವು ಜನರನ್ನು ಆವರಿಸಿಕೊಳ್ಳುತ್ತಿದೆ. ಹಳ್ಳಿ ಹಳ್ಳಿಗಳೂ ಇಂಟರ್ನೆಟ್ ಸೌಲಭ್ಯ ಪಡೆದುಕೊಂಡು ಡಿಜಿಟಲೀಕರಣದತ್ತ ದಾಪುಗಾಲು ಹಾಕುತ್ತಿವೆ. ಜನರು ಯಾವುದೇ ವಿಷಯದ ಮಾಹಿತಿ ಬೇಕಾದರೂ ಇಂಟರ್ನೆಟ್ ನ ಮೊರೆಹೋಗುವುದು ಅನಿವಾರ್ಯವೆಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಜನರ ಈ ಬದಲಾದ ಹವ್ಯಾಸವನ್ನೇ ಉಪಯೋಗಿಸಿಕೊಂಡು ಅವರನ್ನು ಓದಿನತ್ತ ಸೆಳೆಯುವ ಸದುದ್ದೇಶದಿಂದ ಹಾಗು ಕನ್ನಡಿಗರಿಗೆ ಕನ್ನಡ ಭಾಷೆಯಲ್ಲಿಯೇ ಒಂದು ಬ್ಲಾಗ್ ( ವೆಬ್ಸೈಟ್ ) ಅನ್ನು ಪ್ರಾರಂಭಿಸಿ ಆ ಮೂಲಕ ಜನರಿಗೆ ವಿವಿಧ ಮಾದರಿಯ ವಿಷಯಗಳನ್ನು ಒದಗಿಸುವ ಬಗ್ಗೆ ಚಿಂತನೆ ಮಾಡಿರುತ್ತೇನೆ.
ನನ್ನ ಈ ಸಮಾಜಮುಖಿ ಕಾರ್ಯದಲ್ಲಿ ನೆರವು ನೀಡಲು ನನ್ನ ಜೊತೆ ನನ್ನ ಕೆಲವು ಶಾಲಾ ಕಾಲೇಜಿನ ಗೆಳೆಯ/ಗೆಳತಿಯರು, ವಿವಿಧ ರಂಗಗಳಲ್ಲಿ ದುಡಿಯುತ್ತಿರುವ ಕೆಲವು ಸ್ನೇಹಿತರು, ಪೊಲೀಸ್ ಇಲಾಖೆಯ ಕೆಲವು ನಿವೃತ್ತ ಅಧಿಕಾರಿಗಳು ಒಪ್ಪಿಕೊಂಡಿರುತ್ತಾರೆ. ಈ ಬ್ಲಾಗ್ ಅನ್ನು ಪ್ರಾರಂಭಿಸಲು ಮೇಲ್ಕಂಡ ಎಲ್ಲರು ಸಲಹೆ ಸೂಚನೆಗಳನ್ನು ನೀಡಿದ್ದು, ಅವರೆಲ್ಲರ ಅಭಿಲಾಷೆಯಂತೆ ಈ ಕೆಳಕಂಡ ವಿಷಯಗಳ ಬಗ್ಗೆ ಲೇಖನಗಳು, ವಿಶ್ಲೇಷಣಾ ವರದಿಗಳು ಹಾಗೂ ಇತರೆ ಮಾಹಿತಿಗಳನ್ನು ನೀಡಲು ಚಿಂತನೆ ನಡೆಸಿದ್ದೇನೆ.
೧) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗಳು ಒಂದೇ ಸೂರಿನಡಿ ಒದಗಿಸುವುದು
೨) ಪ್ರಚಲಿತ ಘಟನೆಗಳ ಬಗ್ಗೆ ವಿಸ್ತೃತ ಲೇಖನಗಳು
೩) ಪ್ರಚಲಿತದಲ್ಲಿರುವ ಕಾನೂನು ವಿಷಯಗಳ ಬಗ್ಗೆ ಮಾಹಿತಿ ಹಾಗು ಕಾನೂನಿನ ಸಮಸ್ಯೆ ಎದುರಿಸುತಿರುವ ವ್ಯಕ್ತಿಗಳಿಗೆ ಉಚಿತ ಕಾನೂನು ಸಲಹೆ
೪) ಕನ್ನಡ ಚಲನಚಿತ್ರ ಗೀತೆಗಳ ಸಾಹಿತ್ಯ
೫) ಭಾರತ ದೇಶಕ್ಕಾಗಿ/ಕನ್ನಡ ನಾಡು ನುಡಿಗಾಗಿ ದುಡಿದಿರುವ ಮಹಾನ್ ವ್ಯಕ್ತಿಗಳ ಬಗ್ಗೆ ಲೇಖನಗಳು
೬) ಕ್ರೀಡೆಗಳ ಬಗ್ಗೆ ಲೇಖನಗಳು
೭) ಶಾರೀರಿಕ ದೃಢತೆಯನ್ನು ಕಾಪಾಡುವ ಬಗ್ಗೆ ಲೇಖನಗಳು
೮) ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಹಾಗು ಇಲೆಕ್ಟ್ರಾನಿಕ್ ಗ್ಯಾಜೆಟ್ ಗಳ ವಿಶ್ಲೇಷಣೆ ಹಾಗು ಅದರ ಸಂಪೂರ್ಣ ಉಪಯೋಗದ ಬಗ್ಗೆ ಮಾಹಿತಿ
೯) ಉದ್ಯೋಗದ ಅನ್ವೇಷಣೆಯಲ್ಲಿ ಇರುವವರಿಗಾಗಿ ಸರ್ಕಾರಿ/ಖಾಸಗಿ ಉದ್ಯೋಗಗಳ ಬಗ್ಗೆ ಮಾಹಿತಿ
೧೦) ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಷಯಗಳ ಸತ್ಯಾಸತ್ಯತೆ ಬಗ್ಗೆ ಮಾಹಿತಿ

ಇವೆಲ್ಲದರ ಜೊತೆಗೆ ಬ್ಲಾಗ್ ನಲ್ಲಿ ನನ್ನ ಜೊತೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪರ್ಕ ಸಾಧಿಸಲು ವ್ಯವಸ್ಥೆ ಇರುತ್ತದೆ.

ನಾನು ಈಗಾಗಲೇ ಹೇಳಿದಂತೆ ನನ್ನ ಜೊತೆ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನಮಾನಗಳನ್ನು ಹೊಂದಿರುವ ಅನೇಕ ಸ್ನೇಹಿತರು ಮತ್ತು ಹಿತೈಷಿಗಳು ಇದ್ದು ಈ ಬ್ಲಾಗ್ ಅನ್ನು ರಾಜಕೀಯ ಹಾಗು ಸರ್ಕಾರದ ನೀತಿ ನಿರ್ಧಾರಗಳನ್ನು ಟೀಕಿಸುವ/ವಿಶ್ಲೇಷಣೆ ಮಾಡುವ ವಿಷಯಗಳಿಂದ ಹೊರತಾಗಿ ರೂಪಿಸಬೇಕೆನ್ನುವುದು ನನ್ನ ಅಭಿಲಾಷೆಯಾಗಿದ್ದು, ಈ ನನ್ನ ಕಾರ್ಯಕ್ಕೆ ಶುಭಕೋರುವುದರ ಜೊತೆಗೆ ಈ ಬ್ಲಾಗ್ ಅನ್ನು ಸಮಾಜಮುಖಿ ಮಾಡುವ ನಿಟ್ಟಿನಲ್ಲಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ಪ್ರೋತ್ಸಾಹಿಸುವಿರೆಂದು ಭಾವಿಸಿರುತ್ತೆನೆ.

ಓದುಗರು ತಮ್ಮಲ್ಲಿರುವ ಯಾವುದೇ ವಿಷಯಗಳ ಲೇಖನಗಳು, ಮಾಹಿತಿಗಳನ್ನು ಹಂಚಿಕೊಳ್ಳಲು ಬಯಸಿದರೆ ಈ ಬ್ಲಾಗ್ ನಲ್ಲಿ ಅವಕಾಶ ನೀಡಲಾಗುವುದು

ಇದು ಕನ್ನಡದ, ಕನ್ನಡಿಗರಿಂದ, ಕನ್ನಡಿಗರಿಗಾಗಿ ಇರುವ ಒಂದು ಬ್ಲಾಗ್

 

Mind Sharing?